ಎಲ್ಡೊರಾಡೊ: ಚಿನ್ನದ ಮುಲಾಮಿನ ಎಂಬ ಅರ್ಥ ಬರುವ ಈ ಶಬ್ದ ಅಮೆರಿಕದ ಕೊಲಂಬಿಯದ ಬೊಗೊಟ ಬಳಿಯ ಇಂಡಿಯನ್ ನಗರವೊಂದರ ನಾಯಕನ ಹೆಸರಾಗಿತ್ತು. ಪರ್ವದಿನಗಳಲ್ಲಿ ಆತ ಮೈತುಂಬ ಸ್ವರ್ಣಧೂಳಿ ಲೇಪಿಸಿಕೊಂಡು ಬತ್ತಲೆಯಾಗಿ ಸರೋವರದಲ್ಲಿ ಧುಮುಕಿ ಮೀಯುತ್ತಿದ್ದನೆಂದು ಪ್ರತೀತಿ. ಆತನ ಪ್ರಜೆಗಳು ನೀರಿಗೆ ಒಡವೆಗಳನ್ನೂ ಸ್ವರ್ಣದ ವಸ್ತುಗಳನ್ನೂ ಹಾಕುತ್ತಿದ್ದರು. ಈ ದಂತಕಥೆಯನ್ನು ಕೇಳಿದ ಸ್ಪ್ಯಾನಿಷರು ಪೆರುವಿನಿಂದಲೂ ಜರ್ಮನರು ವೆನಿಜುವೇಲ ದಿಂದಲೂ ಆ ಸ್ವರ್ಣಪುರುಷನನ್ನು ಅನ್ವೇಷಿಸುತ್ತ ಇಲ್ಲಿಗೆ ಬಂದರು. ಆದರೆ ಆತ ಕಾಣಸಿಗಲಿಲ್ಲ. ಸ್ಪ್ಯಾನಿಷರು ಸುತ್ತಿನ ಪ್ರದೇಶವನ್ನೆಲ್ಲ ಜಯಿಸಿದರು. ಅನ್ವೇಷಣೆ ನಿಲ್ಲದೆ ಮುಂದುವರಿಯಿತು. ಇಲ್ಲೆಲ್ಲ ಚಿನ್ನದ ಆಸೆಯಿಂದ ಅಲೆದಾಡಿ ನೆಲವನ್ನು ಗೆದ್ದುಕೊಂಡ ಪಾಶ್ಚಾತ್ಯರು ಇಡೀ ಪ್ರದೇಶವನ್ನೇ ಎಲ್ಡೊರಾಡೊ ಎಂದು ಕರೆದರು. ಬ್ರೆಜಿûಲಿನವರು ರಚಿಸಿದ ನಕ್ಷೆಯಲ್ಲಿ ಎಲ್ಡೊರಾಡೊವೂ ಸ್ಥಾನ ಪಡೆಯಿತು. ಚಿನ್ನ ಇದೆಯೆಂದು ನಂಬಲಾಗಿದ್ದ ಇಂಥ ಮಿಥ್ಯಾ ಪ್ರದೇಶಗಳು ಅನೇಕವಿವೆ ಅಪ್ರಯಾಸವಾಗಿ ಶೀಘ್ರಸಂಪತ್ತು ದೊರಕಬಹುದಾದ ಪ್ರದೇಶವನ್ನು ಎಲ್ಡೊರಾಡೊ ಎಂದು ಕರೆಯುವುದು ವಾಡಿಕೆ ಯಾಗಿದೆ. ಸಾಹಿತ್ಯದಲ್ಲೂ ಇದು ಸ್ಥಾನ ಪಡೆದಿದೆ (ಉದಾ: ಮಿಲ್ಟನನ ಪ್ಯಾರಡೈಸ್ ಲಾಸ್ಟ್‌; ವಾಲ್ಟೇರನ ಕ್ಯಾಂಡಿಡೆ).  				       *

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ